ಪುಣ್ಯನಿಧಿ
ಚಂದ್ರವಂಶದ ಒಬ್ಬ ವಿಷ್ಣುಭಕ್ತನಾದ ರಾಜ. ಇವನ ರಾಜಧಾನಿ ದಕ್ಷಿಣ ಮಧುರೆ. ವೈಕುಂಠದಲ್ಲಿ ವಿಷ್ಣು ಈತನನ್ನು ಒಮ್ಮೆ ಪ್ರಶಂಶಿಸಿದಾಗ ಲಕ್ಷ್ಮಿ ಆತನೊಡನೆ ಪಣತೊಟ್ಟು ಪುಣ್ಯನಿಧಿಯ ವೈಷ್ಣವ ಭಕ್ತಿಯನ್ನು ಪರೀಕ್ಷಿಸಲು ತಾನು ಎಂಟು ವರ್ಷದ ಸುಂದರ ಕನ್ಯೆಯಾಗಿ ಧನುಷ್ಕೋಟಿ ತೀರ್ಥಕ್ಕೆ ಬಂದಳು. ಪುಣ್ಯನಿಧಿ ಅಲ್ಲಿಗೆ ಸ್ನಾನಕ್ಕಾಗಿ ಬಂದಿದ್ದ. ತಾನು ಅನಾಥೆಯೆಂದು ತಿಳಿಸಿದಾಗ ರಾಜ ಆಕೆಯನ್ನು ತನ್ನ ಮನೆಯಲ್ಲಿರಲು ಭಿನ್ನವಿಸಿಕೊಂಡ. ತನ್ನನ್ನು ಬೇರೆಯವರು ಬಲಾತ್ಕಾರದಿಂದ ಹಿಡಿದ ಪಕ್ಷದಲ್ಲಿ ಅವರನ್ನು ಶಿಕ್ಷಿಸುವುದಾದರೆ ಮಾತ್ರ ಬರುತ್ತೇನೆಂದ ಕನ್ಯೆಯ ಮಾತಿಗೆ ರಾಜ ಒಪ್ಪಿ, ಆಕೆಯನ್ನು ಕರೆದುಕೊಂಡು ಬಂದು ತನ್ನ ರಾಣಿ ವಿಂಧ್ಯಾವಳಿಯ ಕೈಗೆ ಒಪ್ಪಿಸಿದ. ಇತ್ತ, ವಿಷ್ಣು ಹೆಂಡತಿಯನ್ನು ಹುಡುಕುತ್ತಾ ಬಂದು ಉದ್ಯಾನದಲ್ಲಿ ಸಖಿಯರೊಂದಿಗೆ ಹೂ ಕೊಯ್ಯುತ್ತಿದ್ದ ಲಕ್ಷ್ಮೀಬಾಲೆಯನ್ನು ಕಂಡು ಶೈವ ಬ್ರಾಹ್ಮಣ ರೂಪದಿಂದ ಆಕೆಯ ಕೈ ಹಿಡಿದ. ಕನ್ಯೆಯ ಆಕ್ರೋಶವನ್ನು ಕೇಳಿದ ರಾಜ ಅಲ್ಲಿಗೆ ಧಾವಿಸಿ ಬಂದು ಕನ್ಯೆಯನ್ನು ಸಮಾಧಾನಪಡಿಸಿ ಆ ಶೈವ ಬ್ರಾಹ್ಮಣನನ್ನು ನಿಗಡಬದ್ಧನನ್ನಾಗಿಸಿ ಮಂಟಪದಲ್ಲಿರಿಸಿದ. ಅದೇ ದಿನ ರಾತ್ರಿ ರಾಜನ ಕನಸಿನಲ್ಲಿ ಶೈವ ಬ್ರಾಹ್ಮಣನಾಗಿದ್ದ ವಿಷ್ಣು ಕಾಣಿಸಿಕೊಂಡು ತನ್ನ ನಿಜ ರೂಪ ತೋರಿದ. ತಾನು ರಕ್ಷಿಸಿದ್ದ ಆತನ ಕನ್ಯೆ ಆತನ ಪಕ್ಕ ನಿಂತು ಲಕ್ಷ್ಮಿಯಾಗಿ ಕಾಣಿಸಿಕೊಂಡಳು. ಬೆಳಗಾದ ಮೇಲೆ ರಾಜ ಆ ಬ್ರಾಹ್ಮಣನನ್ನು ಬಿಡಿಸಿ ಸ್ತುತಿಸಿದ. ವಿಷ್ಣು ಆಗ ತನಗೂ ತನ್ನ ಹೆಂಡತಿಗೂ ನಡುವೆ ಏರ್ಪಟ್ಟ ಪಣದ ವಿಚಾರವನ್ನು ವಿವರಿಸಿದ. ಅನಂತರ ರಾಜನ ಪ್ರಾರ್ಥನೆಯನ್ನು ಮನ್ನಿಸಿ ವಿಷ್ಣು ಸೇತು ಮಾಧವ ಎಂಬ ಹೆಸರಿನಿಂದ ಆ ಕ್ಷೇತ್ರದಲ್ಲಿ ನೆಲಸಿದ. ಈ ವಿಷಯ ಸ್ಕಾಂದಪುರಾಣದಲ್ಲಿದೆ.
(ಎಚ್.ಎಸ್.ಯು.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ